ಗುಲಗಂಜಿ
 
ಲೆಗ್ಯೂಮಿನೋಸೀ ಕುಟುಂಬದ ಪ್ಯಾಪಿಲಿಯೋನೇಸೀ ಉಪ ಕುಟುಂಬಕ್ಕೆ ಸೇರಿದ ಒಂದು ಬಳ್ಳಿ.  ಏಬ್ರಸ್ ಪ್ರಿಕಟೋರಿಯಸ್ ಎಂಬುದು ಇದರ ಶಾಸ್ತ್ರೀಯ ನಾಮ.  ಇಂಗ್ಲೀಷಿ6ನ ಸಾಮಾನ್ಯ ಬಳಕೆಯ ಹೆಸರು ಕ್ರ್ಯಾಬ್ಸ್ ಐ. ಇಂಡಿಯನ್ ಲಿಕರಿಸ್ ಎಂಬ ಹೆಸರೂ ಇದಕ್ಕೆ ಉಂಟು.

ಭಾರತಾದ್ಯಂತ ಗುಲಗಂಜಿಯ ವ್ಯಾಪ್ತಿ ಉಂಟು.  ಮೈದಾನ ಸೀಮೆಗಳಲ್ಲಿ ಇದು ಹೇರಳವಾಗಿದೆ.  ಹಿಮಾಲಯದಲ್ಲಿ 1.100 ಮೀ.  ಎತ್ತರದ ಪ್ರದೇಶಗಳಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ.  ಶ್ರೀಲಂಕಾ, ಬರ್ಮ, ಕಾಂಬೋಡಿಯ, ಸಯಾಮ್ ಮುಂತಾದ ದೇಶಗಳಲ್ಲೂ ಗುಲಗಂಜಿ ಕಾಣಬರುತ್ತದೆ.  ಇತರ ಆಸರೆ ಸಸ್ಯಗಳನ್ನು ಆಶ್ರಯಿಸಿ ಬೆಳೆಯುವ ಬಳ್ಳಿಯಾದ ಇದು ಸುಮಾರು 5-6 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ.  ಇದರ ಎಲೆಗಳು ಗರಿರೂಪದ ಸಂಯುಕ್ತ ಮಾದರಿಯವು.   ಒಂದೊಂದು ಎಲೆಯಲ್ಲೂ 20-40 ಕಿರುಎಲೆಗಳಿವೆ.  ಎಲೆಗಳ ಜೋಡಣೆ ಪರ್ಯಾಯ ಮಾದರಿಯದು.  ಎಲೆಗಳ ಕಂಕುಳಲ್ಲಿ ರೇಸಿóೀಮ್ ಮಾದರಿಯ ಚಿಕ್ಕ ಗಾತ್ರದ ಹೂಗೊಂಚಲುಗಳು ಹುಟ್ಟುತ್ತವೆ.  ಹೂಗಳೂ ಗಾತ್ರದಲ್ಲಿ ಚಿಕ್ಕವು.  ಅವುಗಳ ಬಣ್ಣ ಬಿಳಿ ಇಲ್ಲವೆ ನಸುಗೆಂಪು.  ಫಲ ಲೆಗ್ಯೂಮ್ ಮಾದರಿಯದು.  ಸಾಮಾನ್ಯವಾಗಿ ಅನೇಕ ಫಲಗಳು ಒಂದು ಗೊಂಚಲಿನಲ್ಲಿರುತ್ತವೆ.  ಬಲಿತು ಒಣಗಿದ ಅನಂತರ ಕಾಯಿಗಳು ಬಿರಿಯುವುದರಿಂದ ಒಳಗಿನ ಬೀಜಗಳು ಚೆನ್ನಾಗಿ ಗೋಚರಿಸುತ್ತವೆ.  ಒಂದೊಂದು ಫಲದಲ್ಲೂ 3-5  ಬೀಜಗಳಿರುತ್ತವೆ.  ಬೀಜಗಳ ಬಣ್ಣ ಕೆಂಪು.  ಕಾಯಿಯ ಒಳಾವರಣಕ್ಕೆ ಬೀಜ ಅಂಟುವ ಬಳಿ ಬೀಜದ ಮೇಲೆ ಕಪ್ಪು ಬಣ್ಣದ ಮಚ್ಚೆಯಿದೆ.  ಕೆಲವೊಮ್ಮೆ ಬೀಜಗಳು ಬಳಿ ಬಣ್ಣಕ್ಕಿರುವುದೂ ಉಂಟು ಕೆಂಪು ಮತ್ತು ಕರಿಬಣ್ಣದಿಂದಾಗಿಯೂ ಥಳಥಳನೆ ಹೊಳೆಯುತ್ತಿರುವುದರಿಂದಲೂ ಬೀಜಗಳು ಬಲು ಸುಂದರವಾಗಿ ಕಾಣುತ್ತವೆ.  

ಗುಲಗಂಜಿಗೆ ಹಲವಾರು ಉಪಯುಕ್ತ ಗುಣಗಳುಂಟು.  ಅತಿಮಧುರ ಎಂಬ ಸಸ್ಯದ ಬೇರಿನಲ್ಲಿರುವ ಲಿಕರಿಸ್ ಎಂಬ ವಸ್ತುವಿನ ಮುಖ್ಯ ಸತ್ತ್ವವಾದ ಗ್ಲೈಸಿರೈಸಿನ್ ಎಂಬುದು ಗುಲಗಂಜಿಯ ಬೇರು ಹಾಗೂ ಎಲೆಗಳಲ್ಲಿದೆ.  ಇವುಗಳಿಂದ ತಯಾರಿಸಿದ ಕಷಾಯವನ್ನು ನೆಗಡಿ, ಕೆಮ್ಮು ಮತ್ತು ಹೊಟ್ಟೆನುಲಿತಗಳಿಗೆ (ಕಾಲಿಕ್) ಔಷಧಿಯಾಗಿ ಉಪಯೋಗಿಸುತ್ತಾರೆ.  ಶೀತ ದೋಷದಿಂದ ಉಂಟಾಗುವ ಗೊಗ್ಗರು ಧ್ವನಿಯನ್ನು ಸರಿಪಡಿಸಿಕೊಳ್ಳಲು ಗುಲಗಂಜಿಯ ಎಲೆಗಳನ್ನು ಅಗಿದು ತಿನ್ನುತ್ತಾರೆ. 

ಹಾರಗಳು ಮತ್ತು ಜಪಮಾಲೆಗಳನ್ನು ತಯಾರಿಸಲು ಗುಲಗಂಜಿ ಬೀಜಗಳನ್ನು ಉಪಯೋಗಿಸುತ್ತಾರೆ.  ಬಹುಪುರಾತನ ಕಾಲದಿಂದಲೂ ಗುಲಗಂಜಿಯನ್ನು ಚಿನ್ನ ಬೆಳ್ಳಿ ವ್ಯಾಪಾರಿಗಳು ತೂಕದ ಮಾನವಾಗಿ ಉಪಯೋಗಿಸುತ್ತಿದ್ದಾರೆ.  ಬೇಯಿಸಿದ ಗುಲಗಂಜಿ ಈಜಿಪ್ಟ್‍ನಲ್ಲಿ ಆಹಾರವಾಗಿ ಬಳಸಲ್ಪಡುತ್ತದೆ.  ಭಾರತದಲ್ಲೂ ಕೆಲವು ಕಡೆ ಬರಗಾಲದಲ್ಲಿ ಆಹಾರವಾಗಿ ಉಪಯೋಗಿಸುವುದಿದೆ.  ಅತಿಯಾಗಿ ಸೇವಿಸಿದರೆ ತಲೆನೋವು ಬರುತ್ತದೆ.

ಗುಲಗಂಜಿಯ ಬೀಜಗಳಲ್ಲಿ ಏಬ್ರಿನ್ ಎಂಬ ಟಾಕ್ಸಾಲ್ಬ್ಯುಮಿನ್ ಇದೆ. ಇದೊಂದು ಕಟುವಿಷ.  ದೇಹದ ತೂಕದ ಪ್ರತಿ ಕಿಲೋಗ್ರಾಮಿಗೂ 0.0005 ರಿಂದ 0.001 ಮಿಗ್ರಾಂ.  ಪರಿಮಾಣದಲ್ಲಿ ಏಬ್ರಿನ್ ದೇಹಕ್ಕೆ ಸೇರಿದರೆ ಪ್ರಾಣಹಾನಿಯಾಗುತ್ತದೆ.  ಬೀಜಗಳನ್ನು ಪುಡಿಮಾಡಿ ಅದರಿಂದ ತಯಾರಿಸಿದ ದ್ರಾವಣವನ್ನು ರೆಪ್ಪೆಗಳ ಒಳಭಾಗಕ್ಕೆ ಲೇಪಿಸಿದರೆ ರಕ್ತಕ್ಕೆ ಏಬ್ರಿನ್ ಸೇರುವುದರಿಂದ ಪ್ರಾಣಹಾನಿಯಾಗುತ್ತದೆ.  ಏಬ್ರಿನ್ ಚರ್ಮದೊಳ್ಳಕ್ಕೆ ಸೇರಿದರೆ ಆ ಭಾಗದಲ್ಲಿ ಒಂದು ರೀತಿಯ ರಕ್ತದೋಷ ಮತ್ತು ಬಾವು ಉಂಟಾಗುತ್ತದೆ.  ಆದರೆ ಬಾಯಿ, ಅನ್ನನಾಳ, ಮತ್ತು ಹೊಟ್ಟೆಯಲ್ಲಿ ಏಬ್ರಿನ್ ಯಾವ ದುಷ್ಟರಿಣಾಮವನ್ನೂ ಮಾಡುವುದಿಲ್ಲ.  ಏಕೆಂದರೆ ಅದು ಸುಲಭವಾಗಿ ಪಚನಗೊಂಡು ನಿರುಪದ್ರವಿಯಾಗುತ್ತದೆ.  ಒಂದು ಕಾಲದಲ್ಲಿ ಏಬ್ರಿನನ್ನು ಕಣ್ಣುಸಂಬಂಧಿ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತಿತ್ತು.  ಆದರೆ ಇದರ  ಅಪಾಯಕಾರಿ ಪರಿಣಾಮಗಳಿಂದಾಗಿ ಈಗ ಇದರ ಬಳಕೆ ಇಲ್ಲ.

ದನಗಳನ್ನೂ ಮನುಷ್ಯರನ್ನೂ ಸಾಯಿಸಲು ಗುಲಗಂಜಿಯ ಪುಡಿಯನ್ನು ದುರುಪಯೋಗಿಸುವುದೂ ಉಂಟು.  ಗುಲಗಂಜಿಗಳನ್ನು ಅರೆದು, ಚೂಪಾದ ಸೂಜಿಗಳನ್ನಾಗಿ ಮಾಡಿ ಬಿಸಿಲಿನಲ್ಲಿ ಒಣಗಿಸಿ, ಗಟ್ಟಿಯಾಗಿಸಿ, ವಿಷದ ಕಣೆಗಳಾಗಿ ಪ್ರಯೋಗಿಸುತ್ತಾರೆ.  ಬಲು ವಿಷಪೂರಿತವಾದ ಇವು ದೇಹವನ್ನು ಹೊಕ್ಕ ಭಾಗದಲ್ಲಿ ಊದು ವ್ರಣವನ್ನು ಉಂಟುಮಾಡುತ್ತವೆ.  ಬಲುಬೇಗ  ಈ ಬಾವು ಹೆಚ್ಚಾಗುತ್ತ ಬರುತ್ತದೆ.  ಸೂಕ್ತ ಪರಿಹಾರವಿಲ್ಲದಿದ್ದಲ್ಲಿ 3-5 ದಿವಸಗಳ ಅನಂತರ ಸಾವು ಸಂಭವಿಸುತ್ತದೆ.
(ಟಿ.ಎಸ್.ಸಿ. ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ